ವ್ಯಾಘ್ರಗೀತೆ

ಕೃತಿಕಾರರ ಪರಿಚಯ – ಎ.ಎನ್. ಮೂರ್ತಿರಾವ್
ಪೂರ್ಣಹೆಸರು:
ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್.
ಜನನ: ಕ್ರಿ.ಶ.೧೯೦೦ ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳ.
ಕೃತಿ : ಹಗಲುಗನಸುಗಳು.ಅಲೆಯುವ ಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಮಿನುಗು- ಮಿಂಚು, ಪೂರ್ವಸೂರಿಗಳೊಡನೆ ಚಂಡಮಾರುತ ಮೊದಲಾದ ಪ್ರಮುಖ ಕೃತಿಗಳನ್ನು ಬರೆದಿದ್ದಾರೆ.

ಆಧುನಿಕ ಕನ್ನಡದ ಪ್ರಮುಖ ಗದ್ಯಬರೆಹಗಾರರಾದ 
ಇವರು ಪ್ರಬಂಧಕಾರರಾಗಿಯೇ ಮಾನ್ಯರಾಗಿದ್ದಾರೆ.

ಇವರ ಚಿತ್ರಗಳು- ಪತ್ರಗಳು ಎಂಬ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರು ಎಂಬ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿದೆ. ೧೯೮೪ರಲ್ಲಿ ಕೈವಾರದಲ್ಲಿ ನಡೆದ ೫೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.

೧.ಭಗವದ್ಗೀತೆಯನ್ನು ರಚಿಸಿದವರು ಯಾರು?

ಉ: ಭಗವದ್ಗೀತೆಯನ್ನು ರಚಿಸಿದವರು ಮಹರ್ಷಿ ವೇದವ್ಯಾಸರು.

೨. ಹುಲಿಗೆ ಪರಮಾನಂದವಾಗಲು ಕಾರಣವೇನು?

ಉ:ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.

೩. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?

ಉ: ಹುಲಿಗೆ ತಮ್ಮ ಮುಖ ದರ್ಶನವಾಗದಂತೆ ತಪ್ಪಿಸಿಕೊಳ್ಳುವಲ್ಲಿ ಶಾನುಭೋಗರ ತಲೆ ಸುತ್ತಲಾರಂಭಿಸಿತು.

೪. ಶಾನುಭೋಗರ ‘ಬ್ರಹ್ಮಸ್ತ್ರ’ ಯಾವುದು ?

ಉ: ಶಾನುಭೋಗರ ಬ್ರಹ್ಮಾಸ್ಟ್ರ ಖಿರ್ದಿ ಪುಸ್ತಕ.

೫. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು ?

ಉ: ಹಸಿದು ಮಲಗಿದ್ದ ಹುಲಿಯು ಆಹಾರಕ್ಕೆ ವಿಧಿಯು ಏನನ್ನು ಒದಗಿಸುವುದೋ ಎಂದು ಯೋಚಿಸಿತು.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
೧. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು ?

ಉ: ಮದಲಿಂಗನ ಕಣಿವೆಯಿಂದ ಶಾನುಭೋಗರ ಹಳ್ಳಿಗೆ ಕಾಡುದಾರಿ. ಅಂದು ಬೆಳದಿಂಗಳ ದಿನ. ಆ ಮದಲಿಂಗನ ಕಣಿವೆಯಲ್ಲಿ ಬರುವಾಗ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಯೋಚಿಸಿದರು.

೨. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಉ: ಭರತಖಂಡದ  ಹುಲಿಗಳು ಧರ್ಮಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತವೆ. ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಮಹರ್ಷಿ ವೇದವ್ಯಾಸರಿಂದ ರಚಿತವಾದ ಭಗದ್ಗೀತೆಯಂಥ ಗ್ರಂಥವಿದೆಯೋ ಇಂತಹ ಈ ¨ಭರತ ¨ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ. ಯಾರನ್ನೇ ಆಗಲಿ, ಭರತಖಂಡದ ಹುಲಿಗಳು  ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.

೩. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.

ಚಿಕ್ಕನಾಯಕನಹಳ್ಳಿಗೆ  ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗಿ ಬರುತ್ತಿದ್ದರು. ಶಾನುಭೋಗರು  ಬಿದ್ದ ಸ್ಥಳಕ್ಕೆ ಕಾಲು ದಾರಿ ಮಾತ್ರ ಇತ್ತು. ಎತ್ತುಗಳು ಕಣಿ ಹಾಕಿಕೊಂಡು ನಿಂತವು. ಎತ್ತುಗಳ ಘಂಟೆಯ ಶಬ್ದ ಮತ್ತು ರೈತರ ಮಾತು ಕೇಳಿ ನಿರಾಶೆಯಿಂದಲೂ ಕೋಪದಿಂದಲೂ ಹುಲಿ ಗರ್ಜಿಸಿ ಓಡಿ ಹೋಯಿತು. ಗಾಡಿಯವರು  ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದಾಗ, ಮತ್ತೆ ಗರ್ಜನೆ ಕೇಳಲಿಲ್ಲ. ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ಗುಂಡು ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ ತೆಂಗಿನಗರಿಯ  ಪಂಜು ಹೊತ್ತಿಸಿಕೊಂಡು ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ  ಎಚ್ಚರಿಸಿದರು.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

೧. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.

ಉ: ಹುಲಿ ಎಂದರೆ ಕ್ರೂರಪ್ರಾಣಿ. ಕೊಂದು ತಿನ್ನುವುದೊಂದೆ ಅದರ ಸ್ವಭಾವ ಎಂದು ಭಾವಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಹುಲಿ ಆಹಾರಕ್ಕಾಗಿ ಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಿನ್ನುವುದು ತಪ್ಪಲ್ಲ. ಅವು ಮೂಲತಃ ಮಾಂಸಹಾರಿಗಳು. ಶಾಖಾಹಾರವನ್ನು ತಿನ್ನುವ ಮಾನವನೇ ಮಾಂಸವನ್ನು  ತಿನ್ನುವಾಗ ಮಾಂಸಹಾರಿಯಾದ ಹುಲಿ ಪ್ರಾಣಿಗಳನ್ನು ತಿನ್ನುವುದು ಅಪರಾಧವೇನಲ್ಲ. ಆದರೆ ಕೊಲ್ಲುವಾಗ ಧರ್ಮವನ್ನು ಅನುಸರಿಸಿ ಕೊಲ್ಲುತ್ತದೆಯೇ ಅಥವಾ ಧರ್ಮಾಧರ್ಮಗಳ  ಲೆಕ್ಕವನ್ನೇ  ಇಡದೆ 
ಸ್ವಚ್ಛಂದದಿಂದ  ವರ್ತಿಸುತ್ತದೆಯೋ ಎಂಬುದೇ ಇಲ್ಲಿ ಮುಖ್ಯ ಪ್ರಶ್ನೆ. ಹುಲಿಗೆ ಧರ್ಮವೆಲ್ಲಿಂದ ಬಂತು ಎನ್ನಬಹುದು. ಇತರ ದೇಶಗಳಲ್ಲಿರುವ  ಹುಲಿಗಳ ವಿಷಯ ಮೂರ್ತಿರಾಯರಿಗೆ ಪರಿಚಯವಿಲ್ಲ. ಆದರೆ ಭರತಖಂಡದ ಹುಲಿಗಳು ಧರ್ಮವನ್ನು ಅನುಸರಿಸಿ ಬೇಟೆಯಾಡುತ್ತವೆ. ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಮಹರ್ಷಿ ವೇದವ್ಯಾಸರಿಂದ ರಚಿತವಾದ ಭಗದ್ಗೀತೆಯಂಥ ಗ್ರಂಥವಿದೆಯೋ ಇಂತಹ ಈ ಭರತ ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ. ಯಾರನ್ನೇ ಆಗಲಿ, ಭರತಖಂಡದ ಹುಲಿಗಳು  ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ.ಆದ್ದರಿಂದಲೇ ಹುಲಿಯು ಶಾನುಭೋಗರನ್ನು  ಹಿಂದಿನಿಂದ 
ಹಾರಿ ಕೊಲ್ಲಲಿಲ್ಲ ಎಂದು ಮೂರ್ತಿರಾಯರು ಹುಲಿ ಬೇಟಿಯಾಡುವ ಬಗೆಯನ್ನು ವಿವರಿಸಿದ್ದಾರೆ.

೨. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.

ಹುಲಿಯ ಗಮನವನ್ನು ಬೇರೆಡೆಗೆ ಸೆಳೆದು, ಅರೆ ನಿಮಿಷದ ಅವಕಾಶವನ್ನು   
ಒದಗಿಸಿಕೊಟ್ಟು ನನ್ನ ಪ್ರಾಣವನ್ನು ರಕ್ಷಿಸಿದ್ದು ಖಿರ್ದಿಪುಸ್ತಕವೆಂದು ಶಾನುಭೋಗರ ಅಭಿಪ್ರಾಯ. ಅವರು ಅದಕ್ಕೆ ಅನಂತವಾತ್ಸಲ್ಯದಿಂದ ಕೃತಜ್ಞತೆಯನ್ನು ಸಲ್ಲಿಸಿದರು. ಆದರೆ ನಿಜವಾಗಿ ನೋಡಿದರೆ ಶಾನುಭೋಗರು  ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ, ಹುಲಿಯಧರ್ಮ ಶ್ರದ್ದೆಯಿಂದ ಎಂದುಹೇಳಬಹುದು. ಏಕೆಂದರೆ ಅವರ ದುಂಡುದುಂಡಾದ ಶರೀರವನ್ನು  ನೋಡಿದ ಹುಲಿ ಅವರು ಬೆನ್ನು ತಿರುಗಿಸಿ ನಡೆಯುತ್ತಿದ್ದರೂ ಮೇಲೆ ಬಿದ್ದು ಕೊಲ್ಲಬಹುದಾಗಿತ್ತು. ಶಾನುಭೋಗರು ಎಚ್ಚರ ತಪ್ಪಿ ಕೆಳಗೆ ಬಿದ್ದಾಗ ಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು. ಆದರೆ ಅದು ಹಾಗೆ ಮಾಡಲಿಲ್ಲ. ಏಕೆಂದರೆ ಭರತ ಖಂಡದ ಹುಲಿಗಳು ಶತ್ರುವನ್ನು ಕೂಡ ಬೆನ್ನ ಹಿಂದಿನಿಂದ ಹಾರಿ ಕೊಲ್ಲವುದಿಲ್ಲ. ಶಾನುಭೋಗರು ಬೆನ್ನ ಮೇಲೆ
ಮಾಡಿ ಬಿದ್ದಿದ್ದರಿಂದ ಹುಲಿಯು ಅವರನ್ನು ತಿನ್ನದೆ ಬಿಟ್ಟಿತು. ಅದು ಕೊನೆಯವರೆಗೂ ಧರ್ಮವನ್ನು ಅನುಸರಿಸಿತು.ಆದ್ದರಿಂದ ಶಾನುಭೊಗರನ್ನು  ರಕ್ಷಿಸಿದ್ದು ಹುಲಿಯ ಧರ್ಮವೇ  ಎಂದು ಸಮರ್ಥವಾಗಿ ಹೇಳಬಹುದು.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧.“ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ.”

ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ “ಸಮಗ್ರ ಲಲಿತ ಪ್ರಬಂಧಗಳು” ಎಂಬ ಸಂಕಲನದಿಂದ  ಆಯ್ದ “ವ್ಯಾಘ್ರಗೀತೆ” ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ : ಹುಲಿ ಶಾನುಭೋಗರಿಗೆ ಎದುರಿಗೆ ಬರಬೇಕೆಂದು ಪ್ರಯತ್ನಿಸಿ ವಿಫಲವಾದಾಗ ಬೆನ್ನ ಹಿಂದಿನಿಂದ  ಬಿದ್ದೇ ಬಿಡಲೆ ಎಂಬುದು ಅದರ
ಮನಸಿನಲ್ಲಿ  ಗೊಂದಲ. ಆ ಗೊಂದಲ ಕ್ಷಣಕಾಲವೂ ನಿಲ್ಲಲಿಲ್ಲ. ಅದು ಒಳ್ಳೆಯ ವಂಶದಲ್ಲಿ ಜನಿಸಿದ ಹುಲಿ. “ಖಂಡವಿದೆಕೋ, ಮಾಂಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ” ಎಂದು ಆ ಪುಣ್ಯಕೋಟಿ ಹಸು ಹೇಳಿದಾಗ ತನ್ನ ಅಜ್ಜ ಬಾಯಿ ಚಪ್ಪರಿಸಿಕೊಂಡು ಹಸುವನ್ನು ತಿನ್ನಬಹುದಾಗಿತ್ತು. ಆದರೂ  ಆ ಹುಲಿರಾಯ  ಸತ್ಯವ್ರತೆಯಾದ  ಪುಣ್ಯಕೋಟಿಯನ್ನು ತಿನ್ನದೆ ಪ್ರಾಣಬಿಟ್ಟಿತು. ಅಂಥ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಕೈ ಹಾಕುವುದೆ? ಎಂದು ಹುಲಿ ಯೋಚಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ಪುಣ್ಯಕೋಟಿ ಕಥೆಯಲ್ಲಿನ ವ್ಯಾಘ್ರನ ಆದರ್ಶ ತನಗೂ 
ಮಾದರಿ ಹಾಗೂ ಇದು ತನ್ನ ಧರ್ಮ ಎಂಬ ಈ ಹುಲಿಯ ಚಿಂತನೆ
ಸ್ವಾರಸ್ಯಪೂರ್ಣವಾಗಿದೆ.

೨. “ಸ್ವಧರ್ಮೇ ನಿಧನಂ ಶ್ರೇಯಃ”

ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ “ಸಮಗ್ರ ಲಲಿತ ಪ್ರಬಂಧಗಳು” ಎಂಬ ಸಂಕಲನದಿಂದ  ಆಯ್ದ “ವ್ಯಾಘ್ರಗೀತೆ” ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ: ಹುಲಿ ಶಾನುಭೋಗರಿಗೆ ಎದುರಿಗೆ ಬರಬೇಕೆಂದು ಪ್ರಯತ್ನಿಸಿ ವಿಫಲವಾದಾಗ ಬೆನ್ನ ಹಿಂದಿನಿಂದ  ಬಿದ್ದೇ ಬಿಡಲೆ ಎಂಬುದು ಅದರ
ಮನಸಿನಲ್ಲಿ  ಗೊಂದಲ. ಪುಣ್ಯಕೋಟಿ ಕಥೆಯ ತನ್ನ ಅಜ್ಜನ ಆದರ್ಶ ನೆನಪಿಸಿಕೊಂಡು, ಅಂಥ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ  ಹಾಕುವುದೆ ಸರಿಯಲ್ಲ ಎಂದುಕೊಂಡಾಗ ಹುಲಿಗೆ ಭಗವದ್ಗೀತೆಯ “ಸ್ವಧರ್ಮೇ ನಿಧನಂ ಶ್ರೇಯಃ” ಎಂಬ ವಾಕ್ಯ ನೆನಪಿಗೆ  ಬಂದ ಸಂದರ್ಭವಾಗಿದೆ.
ಸ್ವಾರಸ್ಯ : ಹುಲಿ ತನ್ನ ಧರ್ಮಶ್ರದ್ಧೆಯನ್ನು ಬಿಡಬಾರದು. ಸ್ವಧರ್ಮವನ್ನು ಅನುಸರಿಸಿ ನಿಧನ ಹೊಂದುವುದೇ ಶ್ರೇಯ ಎಂದು ಚಿಂತಿಸುವುದು ಸ್ವಾರಸ್ಯಪೂರ್ಣವಾಗಿದೆ.

೩. “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು”

ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ “ಸಮಗ್ರ ಲಲಿತ ಪ್ರಬಂಧಗಳು” ಎಂಬ ಸಂಕಲನದಿಂದ  ಆಯ್ದ “ವ್ಯಾಘ್ರಗೀತೆ” ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ: ಶಾನುಭೋಗರು  ಖಿರ್ದಿ ಪುಸ್ತಕವನ್ನು  ಹುಲಿಯ ಮುಖಕ್ಕೆ ಎಸೆದಾಗ ಅದರ ಮುಖಕ್ಕೆ ಬಂದು ಬಡಿಯಿತು. ಆದರೆ ಹುಲಿಗೆ ಪೆಟ್ಟೇನೂ
ಆಗಲಿಲ್ಲ ಎಂಬುದು ಶಾನುಭೋಗರ ಮನಸ್ಸಿಗೆ ಅರಿವಾಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು  “ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು” ಎನ್ನುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ  ಧಾವಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ಶಾನುಭೋಗರು ಹುಲಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡು ಎಂದು ದೇವರನ್ನು ಪ್ರಾರ್ಥಿಸುವುದು ಸ್ವಾರಸ್ಯಪೂರ್ಣವಾಗಿದೆ.

೪.“ನಾನು ಮುಖ ಮೇಲಾಗಿ ಬಿದ್ದಿದ್ದೇನೆ?”

ಆಯ್ಕೆ: ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ “ಸಮಗ್ರ ಲಲಿತ ಪ್ರಬಂಧಗಳು” ಎಂಬ ಸಂಕಲನದಿಂದ  ಆಯ್ದ “ವ್ಯಾಘ್ರಗೀತೆ” ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ:  ಶಾನುಭೋಗರು  ಪ್ರಜ್ಞೆತಪ್ಪಿ ಬಿದ್ದಿದ್ದಾಗ ಅದೇ ದಾರಿಯಲ್ಲಿ ಗಾಡಿಯಲ್ಲಿ ಹೋಗುತ್ತಿದ್ದ ರೈತರು ಅವರ ಮುಖದ ಮೇಲೆ ನೀರೆರಚಿ ಎಚ್ಚರಿಸಿದ ಸಂದರ್ಭದಲ್ಲಿ ಆಶ್ಚರ್ಯದಿಂದ ಗಾಡಿಯವರನ್ನು  “ನಾನು ಮುಖ ಮೇಲಾಗಿ ಬಿದ್ದಿದ್ದೆನೆ?” ಎಂದು ಕೇಳಿದರು.
ಸ್ವಾರಸ್ಯ : ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಹುಲಿಯು ಏಕೆ ಎಳೆದುಕೊಂಡು ಹೋಗಲಿಲ್ಲ ಎಂದು ಯೋಚಿಸಿದರು. ಹುಲಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡು ಬಂದಿದೆ ಎಂಬ ಉತ್ತರ ಕಂಡುಕೊಳ್ಳುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ.

೫. “ಹುಲಿ ಈಗ ಎಷ್ಟು ಹಸಿದಿರಬೇಕು.”

ಆಯ್ಕೆ: ಈ ವಾಕ್ಯವನ್ನು ಎ.ಎನ್. ಮೂರ್ತಿರಾವ್ ಅವರ “ಸಮಗ್ರ ಲಲಿತ ಪ್ರಬಂಧಗಳು” ಎಂಬ ಸಂಕಲನದಿಂದ  ಆಯ್ದ “ವ್ಯಾಘ್ರಗೀತೆ” ಎಂಬ ಪಾಠದಿಂದ  ಆರಿಸಿಕೊಳ್ಳಲಾಗಿದೆ.
ಸಂದರ್ಭ:ಶಾನುಭೋಗರು ಹುಲಿಯಿಂದ ತಪ್ಪಿಸಿಕೊಂಡು ಜೀವ ಸಹಿತ ಮನೆ ಸೇರಿಕೊಂಡು ರಸದೂಟವನ್ನು ಮಾಡುವ ಸಂದರ್ಭದಲ್ಲಿ “ಹುಲಿ ಈಗ ಎಷ್ಟು ಹಸಿದಿರಬೇಕು” ಎಂಬ ಯೋಚನೆ ಮಾಡಿದರು.
ಸ್ವಾರಸ್ಯ : ನಾನು ಹುಲಿಯಿಂದ ತಪ್ಪಿಸಿಕೊಂಡು ಬಂದು ರಸದೂಟವನ್ನು ಮಾಡುತ್ತಿದ್ದೇನೆ. ಆದರೆ ಆ ಹುಲಿ ಹಸಿವಿನಿಂದ ಬಳಲುತ್ತಿರಬಹುದು ಎಂದು ಶಾನುಭೋಗರು  ನೆನೆಯುವುದು ಸ್ವಾರಸ್ಯಪೂರ್ಣವಾಗಿದೆ.

ಭಾಷಾ ಚಟುವಟಿಕೆ

ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.

೧. ಮಂತ್ರಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು.

೨. ಖಿರ್ದಿ ಪುಸ್ತಕ ಶಾನುಭೋಗರ  ಬ್ರಹ್ಮಸ್ತ್ರ .

೩. ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು.

೪. ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು.

೫. ಶಾನುಭೋಗರು  ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ.

Click here to download vyaghrageethe exercises

Leave a Reply

Your email address will not be published. Required fields are marked *