Yuddha means war. The story Yuddha by Sa Ra Aboobakkar is about the war between two unnamed countries. Pilot Dr. Rahil crashes in enemy territory and, despite his leg injury, reaches a house during a blackout. Inside, two women are crying—an old lady and her daughter-in-law, who is in labor. Rahil helps with the difficult delivery, but the baby is born dead. Soldiers arrive, and Rahil hides while the old lady uses the dead baby to convince them no one is there. Rahil stays for two more days, and the old lady shares her pain of losing everything due to the war. Eventually, her son is taken to the war as well.
Yudha lesson in 10the grade teaches emotions of people. Yudda CBSE X grade lesson is a new addition.

ಸಾ ರಾ ಅಬೂಬಕ್ಕರ್ ಅವರ ಯುದ್ಧ ಕಥೆಯು ಹೆಸರಿಸದ ಎರಡು ದೇಶಗಳ ನಡುವಿನ ಯುದ್ಧದ ಬಗ್ಗೆ. ಪೈಲಟ್ ಡಾ. ರಾಹಿಲ್ ಶತ್ರು ಪ್ರದೇಶದಲ್ಲಿ ಅಪಘಾತಕ್ಕೀಡಾಗುತ್ತಾನೆ ಮತ್ತು ಅವನ ಕಾಲಿನ ಗಾಯದ ಹೊರತಾಗಿಯೂ, ಕತ್ತಲೆಯ ಸಮಯದಲ್ಲಿ ಮನೆಯನ್ನು ತಲುಪುತ್ತಾನೆ. ಒಳಗೆ, ಇಬ್ಬರು ಹೆಂಗಸರು ಅಳುತ್ತಿದ್ದಾರೆ – ಒಬ್ಬ ಮುದುಕಿ ಮತ್ತು ಅವಳ ಸೊಸೆ, ಹೆರಿಗೆಯಲ್ಲಿದ್ದಾರೆ. ಕಷ್ಟದ ಹೆರಿಗೆಗೆ ರಾಹಿಲ್ ಸಹಾಯ ಮಾಡುತ್ತಾರೆ, ಆದರೆ ಮಗು ಸತ್ತಿದೆ. ಸೈನಿಕರು ಆಗಮಿಸುತ್ತಾರೆ, ಮತ್ತು ರಾಹಿಲ್ ಮರೆಮಾಚುತ್ತಾನೆ, ಆದರೆ ಮುದುಕಿ ಸತ್ತ ಮಗುವನ್ನು ಬಳಸಿ ಯಾರೂ ಇಲ್ಲ ಎಂದು ಮನವರಿಕೆ ಮಾಡುತ್ತಾರೆ. ರಾಹಿಲ್ ಇನ್ನೂ ಎರಡು ದಿನ ಇರುತ್ತಾನೆ, ಮತ್ತು ವೃದ್ಧೆಯು ಯುದ್ಧದಿಂದ ಎಲ್ಲವನ್ನೂ ಕಳೆದುಕೊಂಡ ತನ್ನ ನೋವನ್ನು ಹಂಚಿಕೊಳ್ಳುತ್ತಾಳೆ. ಅಂತಿಮವಾಗಿ, ಅವಳ ಮಗನನ್ನೂ ಯುದ್ಧಕ್ಕೆ ಕರೆದೊಯ್ಯಲಾಗುತ್ತದೆ.

ಯುದ್ಧ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. (Answer the following one sentence)

೧. ರಾಹಿಲನು ಯಾರು?
ಉ: ರಾಹಿಲನು ಒಬ್ಬ ಡಾಕ್ಟರ್.
೨. ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?
ಉ: ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಔಷಧ ಮತ್ತು ತುರ್ತು ಪರಿಸ್ಥಿತಿಗೆ ಬೇಕಾದ ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು ಹಿಡಿದುಕೊಂಡಿದ್ದನು.
೩. ಗಡಿ ಪ್ರದೇಶಗಳಲ್ಲಿ ಬ್ಲಾಕ್ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?
ಉ: ಯುದ್ಧಕಾಲದಲ್ಲಿ ರಾತ್ರಿ ವೇಳೆ ಶತ್ರು ಸೈನಿಕರ ವಿಮಾನದ ದಾಳಿ ಮಾಡಲು ಅವಕಾಶವಾಗದಂತೆ, ವಿದ್ಯುತ್ ದೀಪ ಅಥವಾ ಬೆಂಕಿಯನ್ನು ಉರಿಸದೆ, ಕತ್ತಲಿನಲ್ಲಿದ್ದು ರಕ್ಷಿಸಿಕೊಳ್ಳಲು ಗಡಿ ಪ್ರದೇಶಗಳಲ್ಲಿ ಬ್ಲಾಕ್ಔಟ್ ನಿಯಮವನ್ನು ಪಾಲಿಸಲಾಗುತ್ತದೆ.
೪. ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?
ಉ: “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು” ಎಂದು ರಾಹಿಲನು ಮುದುಕಿಯ ಎದುರಿಗೆ ಗಂಭೀರವಾದ ಮಾತು ನುಡಿದನು.
೫. ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು?
ಉ: “ಗಾಯ? ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದೇ ಯುದ್ಧದ ಪರಿ ತಾನೇ?” ಎಂದು ಯುದ್ಧದ ಬಗೆಗೆ ಮುದುಕಿಯು ಗೊಣಗಿಕೊಂಡು ಬಾಗಿಲು ತೆರೆದಳು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು- ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. (Answer the following three – four sentences)

೧. ಡಾಕ್ಟರ್ ಗೆ ವಿಮಾನದ ಪೈಲೆಟ್ ಏನು ಹೇಳಿದನು?
ಉ: “ಡಾಕ್ಟರ್! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಗ್ರೌಂಡ್ ನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನು ಕಾಣಿಸ್ತಾ ಇಲ್ಲವಲ್ಲ?” ಎಂದು ವಿಮಾನದ ಪೈಲೆಟ್ ಡಾಕ್ಟರ್ ಗೆ ಹೇಳಿದನು.
೨. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
ಉ: ಮಹಿಳೆಯ ಆರ್ತನಾದ ಕೇಳಿ ರಾಹಿಲನು ಬೆಚ್ಚಿದನು. ಆ ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಏನು ಸಂಭವಿಸುತ್ತಿದೆ? ನಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಬ್ಲಾಕ್ ಔಟ್ ಸಮಯದಲ್ಲಿ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ? ಎಂಬುದು ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳು.
೩. ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?
ಉ: ಮುದುಕಿಯು ರಾಹಿಲನ ಬಳಿ ನೋಡಪ್ಪ ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆಯೆನ್ನು. ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ? ಯುದ್ಧವಂತೆ, ಯುದ್ಧ!” ಎಂದು ತಿರಸ್ಕಾರದಿಂದ ನುಡಿದಳು.
೪. ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
ಉ: “ಹೂಂ… ನೋಡಿ; ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ; ಅದನ್ನು ನೋಡಿ!  ಈ ಯುದ್ಧ ನನ್ನ ಮೊಮ್ಮಗವನ್ನು ಉಳಿಸಲಿಲ್ಲವಲ್ಲ? ಯಾರಿಗಾಗಿ, ಯಾತಕ್ಕಾಗಿ ಈ ಯುದ್ಧ? ಅದನ್ನಾದರೂ ಹೇಳಿರಲ್ಲ?” ಎಂದು ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದಳು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ. (Answer the following eight – ten sentences)

೧. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು?
ಉ: ಮುದುಕಿಯು ಆ ಊರಿಗೆ ಬಂದು ೫೦ ವರ್ಷಗಳಾಗಿತ್ತು. ಅವರ ಮದುವೆಯಲ್ಲಿ ನೆಮ್ಮದಿಯಿತ್ತು. ಜಮೀನು ಆಸ್ತಿ ಚೆನ್ನಾಗಿತ್ತು. ಆದರೆ ಯುದ್ಧವು ಶುರುವಾಯಿತು. ಆಗ ಮುದುಕಿ ಇರುವ ಊರು ಆ ದೇಶದವರ ಕೈಯಲ್ಲಿತ್ತು. ಅವರ ಧರ್ಮ ಮುದುಕಿಯ ಧರ್ಮ ಬೇರೆ ಬೇರೆ ಎಂಬ ಕಾರಣಕ್ಕಾಗಿ ಯುದ್ಧ ಮಾಡಿದರು. ಸಾವಿರಗಟ್ಟಲೆ ಜನರು ಪ್ರಾಣ ಕಳೆದುಕೊಂಡ ಮೇಲೆ ಯುದ್ಧ ನಿಂತು ಮುದುಕಿಯಿರುವ ಊರು ಈ ದೇಶಕ್ಕೆ ಸೇರಿತು. ಆದರೆ ಯಾವ ಬದಲಾವಣೆಯಾಗಲಿಲ್ಲ. ದುಡಿದದ್ದನ್ನು ದೋಚಿಕೊಂಡು ಹೋದರು. ಮತ್ತೆ ಯುದ್ಧ ಶುರುವಾಯಿತು. ಮನೆಯ ಮಕ್ಕಳನ್ನು ಕರೆದುಕೊಂಡು ಹೋದರು. ಹೀಗೆ ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಮುದುಕಿಯು ವಿವರಿಸಿದಳು.
೨. ರಾಹಿಲನು ಮುದುಕಿಯ ಕುಟುಂಬಕ್ಕೂ ಮುದುಕಿಯು ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ.
ಉ: ರಾಹಿಲನು ಪ್ರಯಾಣಿಸುತ್ತಿದ್ದ ವಿಮಾನವನ್ನು ಶತ್ರು ಸೈನಿಕರು ಹೊಡೆದು ಉರುಳಿಸಿದರು. ರಾಹಿಲನು ನೀರಿನಲ್ಲಿ ಬಿದ್ದನು. ಹೇಗೋ ಈಜಿಕೊಂಡು ಬರುವಾಗ ಎಲ್ಲೋ ಒಂದು ಸಣ್ಣ ಮನೆ ಮಿಂಚಿನಲ್ಲಿ ಕಾಣುತ್ತಿತ್ತು. ಅವನ ಕಾಲಿಗೆ ಪೆಟ್ಟಾಗಿತ್ತು. ಆ ಮನೆಯಿಂದ ಇಬ್ಬರು ಹೆಂಗಸರ ಆರ್ತನಾದ ಕೇಳುತ್ತಿತ್ತು. ರಾಹಿಲನು ಆ ಮನೆಯ ಬಾಗಿಲು ತಟ್ಟಿ ಸಹಾಯ ಕೇಳಿದನು. ಅಲ್ಲಿ ಇರುವ ಮುದುಕಿ ರಾಹಿಲನನ್ನು ಒಳಗೆ ಸೇರಿಸಿದಳು. ಶತ್ರು ಸೈನಿಕರು ರಾಹುಲನನ್ನು ಹುಡುಕಿಕೊಂಡು ಬಂದಾಗ ಮುದುಕಿಯು ತನ್ನ ನಿರ್ಜೀವ ಮೊಮ್ಮಗುವಿನ ದೇಹವನ್ನು ಬಾಗಿಲಲ್ಲಿ ಇಟ್ಟಳು. ತನ್ನ ಮೊಮ್ಮಗುವಿನ ಜೀವ ಈ ಯುದ್ಧದಿಂದ ಹೋಯಿತು ಎಂದು ಅಳತೊಡಗಿದಳು. ಶತ್ರು ಸೈನಿಕರು ಮನೆಯಲ್ಲಿ ರಾಹಿಲನನ್ನು ಹುಡುಕದೆ ಹೊರಟು ಹೋದರು. ಹೀಗೆ ಮುದುಕಿಯು ರಾಹುಲನನ್ನು ಉಳಿಸಿದಳು.
ಮುದುಕಿಯ ಸೊಸೆಗೆ ಹೆರಿಗೆ ಬೇನೆ ಬಂದಿತ್ತು. ರಾಹಿಲನು ಡಾಕ್ಟರ್ ಆಗಿದ್ದರಿಂದ ಆಕೆಯ ಹೆರಿಗೆ ಮಾಡಿಸಲು ನೋಡಿದನು.‌ ಆಕೆಯ ಹೆರಿಗೆ ಸುಲಭವಾಗಿ ಆಗುವದಿಲ್ಲವೆಂದು ಅವನಿಗೆ ತಿಳಿಯಿತು. ರಾಹಿಲನು ಕಷ್ಟಪಟ್ಟು ಮಗುವನ್ನು ಹೊರ ತೆಗೆದನು. ಆದರೆ ಅದು ನಿರ್ಜೀವವಾಗಿತ್ತು. ಮುದುಕಿಯ ಸೊಸೆಯನ್ನು ಬದುಕುಳಿಸಿದನು. ಹೀಗೆ ರಾಹಿಲನು ಮುದುಕಿಯ ಕುಟುಂಬಕ್ಕೂ ಮುದುಕಿಯು ರಾಹಿಲನಿಗೂ ಸಹಾಯ ಮಾಡಿದರು.
೩. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.
ಉ: ಯುದ್ಧವು ದೊಡ್ಡ ದುರಂತಗಳನ್ನುಂಟುಮಾಡುತ್ತವೆ. ಮೊದಲಿಗೆ, ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಮತ್ತು ಕುಟುಂಬಗಳು ನಾಶವಾಗುತ್ತವೆ. ಮನೆ, ಆಸ್ತಿಗಳು ನಾಶವಾಗುತ್ತವೆ. ಜನರು ನಿರಾಶ್ರಿತರಾಗುತ್ತಾರೆ. ಹಸಿವಿನಿಂದ ಬಳಲುತ್ತಾರೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಹದಗೆಡುತ್ತವೆ. ಯುದ್ಧದಿಂದಾಗಿ ಆರ್ಥಿಕ ಕುಸಿತ ಸಂಭವಿಸುತ್ತದೆ. ಜನರಿಗೆ ಕೆಲಸದ ಕಷ್ಟಗಳು ಎದುರಾಗುತ್ತವೆ. ಬಲವಂತವಾಗಿ ಜನರು ಮನೆಬಿಟ್ಟು ಬೇರೆ ಊರುಗಳಿಗೆ ಹೋಗಬೇಕಾಗುತ್ತದೆ.  ಪ್ರಾಣಿಪಕ್ಷಿ, ಜಲ, ಅರಣ್ಯಗಳು ನಾಶವಾಗುತ್ತದೆ. ಶಾಂತಿ, ಸಹಾನುಭೂತಿ ಕಡಿಮೆಯಾಗುತ್ತದೆ. ಜನರಲ್ಲಿ ದ್ವೇಷ ಉಂಟಾಗುತ್ತದೆ. ಅಂತಿಮವಾಗಿ, ಸಮಾಜದ ಬೆಳವಣಿಗೆ ಮಂದಗತಿಯಾಗುತ್ತದೆ. ಜನರು ಭಯ ಮತ್ತು ಅನಿಶ್ಚಿತತೆಯಲ್ಲಿ ಜೀವನ ಸಾಗಿಸುತ್ತಾರೆ.

ಈ. ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ. (Write the context in detail)
೧. “ದಯವಿಟ್ಟು ಬಾಗಿಲು ತೆಗೆಯಿರಿ ನಾನು ಗಾಯಗೊಂಡಿದ್ದೇನೆ”
ಆಯ್ಕೆ: ಈ ಮಾತನ್ನು ಸಾ ರಾ ಅಬೂಬಕ್ಕರ್ ಅವರು ಬರೆದಿರುವ ಸಣ್ಣ ಕಥೆಗಳಲ್ಲಿ ʼಯುದ್ಧʼ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಹಿಲನು ತನ್ನ ಪೆಟ್ಟಾದ ಕಾಲನ್ನು ಎಳೆದುಕೊಂಡು ಆಶ್ರಯಕ್ಕಾಗಿ ಹುಡುಕುತ್ತಿದ್ದನು. ಮಿಂಚಿನ ಬೆಳಕಿನಲ್ಲಿ ಒಂದು ಪುಟ್ಟ ಮನೆಯು ಕಾಣುತ್ತಿತ್ತು. ಅವನು ಆ ಮನೆಯ ಬಾಗಿಲನ್ನು ತಟ್ಟುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾನೆ.
ಸ್ವಾರಸ್ಯ: ಯುದ್ಧದಲ್ಲಿಯ ಗಾಯಾಳುವಾಗಿ ಆಶ್ರಯ ಹುಡುಕಿ, ಜೀವ ಉಳಿಸಿಕೊಳ್ಳುವ ಕಷ್ಟ ಇಲ್ಲಿಯ ಸ್ವಾರಸ್ಯವಾಗಿದೆ.
೨. “ನಾನು ಆಕೆಯನ್ನು ಪರೀಕ್ಷಿಸುವೆ ನೀವು ಬಿಸಿನೀರು ಸಿದ್ಧಪಡಿಸಿ”
ಆಯ್ಕೆ: ಈ ಮಾತನ್ನು ಸಾ ರಾ ಅಬೂಬಕ್ಕರ್ ಅವರು ಬರೆದಿರುವ ಸಣ್ಣ ಕಥೆಗಳಲ್ಲಿ ʼಯುದ್ಧʼ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮುದುಕಿಯ ಸೊಸೆ ಹೆರಿಗೆ ಬೇನೆಯಿಂದ ನರಳುತ್ತಿದ್ದಳು. ರಾಹಿಲನು ಡಾಕ್ಟರ್‌ನಾಗಿದ್ದರಿಂದ ಅವಳ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದನು.
ಸ್ವಾರಸ್ಯ: ತನ್ನ ಕಾಲಿಗೆ ಪೆಟ್ಟಾಗಿದ್ದರೂ, ಕರ್ತವ್ಯವೇ ಮೇಲೆ ಎಂಬುದು ಇಲ್ಲಿಯ ಸ್ವಾರಸ್ಯವಾಗಿದೆ.
೩. “ಯುದ್ಧಕ್ಕೆ ಹೋದ ತನ್ನ ಮಗನ ಕಣ್ಣುಗಳಂತೆಯೇ ಇವೆಯಲ್ಲ”
ಆಯ್ಕೆ: ಈ ಮಾತನ್ನು ಸಾ ರಾ ಅಬೂಬಕ್ಕರ್ ಅವರು ಬರೆದಿರುವ ಸಣ್ಣ ಕಥೆಗಳಲ್ಲಿ ʼಯುದ್ಧʼ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಸೈನಿಕರ ಉಡುಪಿನಲ್ಲಿದ್ದವರು ಬಂದು ಮುದುಕಿಯ ಮನೆಯ ಬಾಗಿಲು ತಟ್ಟಿದರು. ಅವರು ರಾಹಿಲನನ್ನು ಹುಡುಕುತ್ತಿದ್ದರು. ರಾಹಿಲನು ದಯನೀಯವಾಗಿ ಬಾಗಿಲನ್ನು ತೆಗೆಯಬಾರದೆಂದು ಮುದುಕಿಗೆ ಸನ್ನೆ ಮಾಡಿದನು. ಆ ಸಂದರ್ಭದಲ್ಲಿ ಮುದುಕಿಯು ಈ ಮೇಲಿನ ಮಾತನ್ನು ಯೋಚಿಸಿದಳು.
ಸ್ವಾರಸ್ಯ: ರಾಹಿಲನ ದಯನೀಯ ನೋಟ ಮುದುಕಿಗೆ ಯುದ್ಧಕ್ಕೆ ಹೋಗುವ ಇಷ್ಟವಿಲ್ಲದ ತನ್ನ ಮಗನನ್ನು ನೆನಪಿಸಿತು ಎನ್ನುವುದು ಇಲ್ಲಿಯ ಸ್ವಾರಸ್ಯವಾಗಿದೆ.
೪. “ನನ್ನ ಮೊಮ್ಮಗುವಿನ ಹೆಣವಿದೆ ಅಲ್ಲಿ ಅದನ್ನು ನೋಡಿ!”
ಆಯ್ಕೆ: ಈ ಮಾತನ್ನು ಸಾ ರಾ ಅಬೂಬಕ್ಕರ್ ಅವರು ಬರೆದಿರುವ ಸಣ್ಣ ಕಥೆಗಳಲ್ಲಿ ʼಯುದ್ಧʼ ಎಂಬ ಕಥೆಯಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಾಹಿಲನನ್ನು ಉಳಿಸಲು ಮುದುಕಿಯು ಅವಳ ನಿರ್ಜೀವ ಮೊಮ್ಮಗುವಿನ ಶರೀರವನ್ನು ಬಾಗಿಲಲ್ಲಿ ಇಟ್ಟಳು. ಸೈನಿಕರು ಮನೆಯೆಲ್ಲಾ ರಾಹಿಲನಿಗಾಗಿ ಹುಡುಕಬೇಕೆಂಬ ಸಂದರ್ಭದಲ್ಲಿ ಈ ಮಾತನ್ನು ಹೇಳಿದಳು.
ಸ್ವಾರಸ್ಯ: ಬ್ಲಾಕ್‌ ಔಟ್ ನಿಂದ ಆಸ್ಪತ್ರೆಗೆ ಹೋಗಲಾಗದೇ ಜೀವ ಉಳಿಸಲಾಗಲಿಲ್ಲ, ಇದು ಯುದ್ಧದ ದುಷ್ಪರಿಣಾಮ ಎಂಬುದು ಇಲ್ಲಿಯ ಸ್ವಾರಸ್ಯ.

ಉ. ಬಿಟ್ಟ ಸ್ಥಳ ತುಂಬಿರಿ. (Fill in the blanks)

೧. ರಾಹಿಲನ ದೇಹದಲ್ಲಿ ಹೊಸರಕ್ತ ಸಂಚಾರವಾದಂತಾಯಿತು.
೨. ನರಳಾಟದ ಬೆನ್ನಲ್ಲೇ ಹಿರಿಯ ಹೆಂಗಸೊಬ್ಬಳ ಆರ್ತನಾದ ಕೇಳಿ ಬಂತು.
೩. ಮುದುಕಿ ಮತ್ತು ಸೊಸೆಯ ರೋದನ ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು.
೪. ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ?
೫. ಮನೆಯಲ್ಲೊಂದು ಪುಟ್ಟ ಮಗುವಿನ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದನು.

ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.

೧. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
ಗಾದೆ ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿ ಮುತ್ತುಗಳು. ಸತ್ಯ ಸದಾ ಜೀವಂತವಾದುದು. ಸುಳ್ಳು ಎಂದು ಸುಖವನ್ನು ಕೊಡಲಾರದು ಎನ್ನುವುದು ಈ ಗಾದೆಯ ಅರ್ಥ. ಸತ್ಯ ಶಾಶ್ವತವಾದುದು. ಆದ್ದರಿಂದ ನಮ್ಮ ರಾಷ್ಟ್ರೀಯ ಲಾಂಛನದಲ್ಲಿ ‘ಸತ್ಯಮೇವ ಜಯತೇ’ ಎಂಬ ಬರೆಹವಿದೆ. ಸತ್ಯಕ್ಕೆ ಜಯ ಎಂದು ಎಲ್ಲಾ ಧರ್ಮಗಳು ಸಾರುತ್ತವೆ. ಸತ್ಯವನ್ನು ಅನುಸರಿಸುವವರು ಜೀವನದಲ್ಲಿ ಶಾಂತಿ, ಸಂತೋಷ ಮತ್ತು ನಿಜವಾದ ಯಶಸ್ಸನ್ನು ಹೊಂದುತ್ತಾರೆ. ರಾಜ ಸತ್ಯ ಹರಿಶ್ವಂದ್ರ ಜೀವನವೆಲ್ಲ ಸತ್ಯಕ್ಕಾಗಿ ಹೋರಾಡಿದನು. ಗಾಂಧೀಜಿ , ಸ್ವಾಮಿ ವಿವೇಕಾನಂದ ಮೊದಲಾದ ಮಹಾತ್ಮರು ಸತ್ಯ ಜೀವನವನ್ನು ನಡೆಸಿದರು.

ಸುಳ್ಳಿಗೆ ಸುಖವಿಲ್ಲ. ಸುಳ್ಳು ಹೇಳುವವನನ್ನು ಯಾರೂ ನಂಬುವುದಿಲ್ಲ. ಸುಳ್ಳು ಒಂದು ಬಲೆ ಇದ್ದ ಹಾಗೆ ಅದರಲ್ಲಿ ಸಿಕ್ಕಿಬಿದ್ದರೆ ಹೊರ ಬರುವುದು ಕಷ್ಟ.
ಸತ್ಯವೇ ಬೆಳಕು, ಸುಳ್ಳೆ ಕತ್ತಲು. ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ ಎಂಬ ಮಾತನ್ನು ಎಂದಿಗೂ ಯಾರು ಮರೆಯಬಾರದು. ಸುಳ್ಳು ಮತ್ತು ಮೋಸದಿಂದ ಬಂದ ಸುಖವು ತಾತ್ಕಾಲಿಕವಾಗಿರುತ್ತದೆ. ಮೊದಲು ಸುಳ್ಳು ಒಂದಿಷ್ಟು ಸೌಕರ್ಯವನ್ನು ನೀಡಬಹುದು, ಆದರೆ ಅದು ಆನಂದಕರವಾಗಿರುವಷ್ಟು ಬೇಗನೆ ತೊಂದರೆ ಉಂಟುಮಾಡುತ್ತದೆ. ಸುಳ್ಳಿನಿಂದ ಬಂದ ಸುಖವು ದೀರ್ಘಕಾಲಕ್ಕೆ ಉಳಿಯುವುದಿಲ್ಲ ಮತ್ತು ಅದರ ಪರಿಣಾಮಗಳು ಹೆಚ್ಚು ನೋವನ್ನು ಮತ್ತು ಕಷ್ಟವನ್ನು ತರಬಹುದು.

ಈ ಗಾದೆಯು ಸತ್ಯವನ್ನು ಪಾಲಿಸುವ ಅಗತ್ಯವನ್ನು ನುಡಿಸುತ್ತದೆ. ಸತ್ಯವು ಯಾವಾಗಲೂ ಜೀವಂತವಾಗಿರುತ್ತದೆ ಮತ್ತು ಸುಳ್ಳು ಎಂದೂ ಶಾಶ್ವತವಲ್ಲ.

೨. ಆಳಾಗಬಲ್ಲವನು ಅರಸಾಗಬಲ್ಲ

‘ಆಳು’ ಎಂದರೆ ಕೆಲಸ ಮಾಡುವವನು, ದುಡಿಯುವವನು ಎಂಬ ಅರ್ಥ. ಅಂಥವನು ಅರಸಾಗಬಲ್ಲ ಎಂದರೆ ‘ಒಡೆಯ’ ಅಥವಾ ಯಜಮಾನನಾಗಬಹುದು ಎಂದು ಈ ಗಾದೆ ಸೂಚಿಸುತ್ತದೆ. ಕೃಷಿ, ಕೈಗಾರಿಕೆ, ವಿದ್ಯಾಸಂಸ್ಥೆ, ಉದ್ಯಮಗಳು ಮುಂತಾದವುಗಳ ಮುಖ್ಯಸ್ಥರಾಗುವವರಿಗೆ ಆಯಾ ವಿಷಯಗಳ ವಿಚಾರಗಳ ಅರಿವು ಅಗತ್ಯವಾಗಿ ಬೇಕು. ಹಾಗಿದ್ದಾಗ ಮಾತ್ರ ಅಲ್ಲಿಯ ಕೆಲಸಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಕಾಲಕಾಲಕ್ಕೆ ನಡೆಯಬೇಕಾದ ಕಾರ್ಯಗಳನ್ನು ಕೆಲಸಗಾರರಿಂದ ಸಮರ್ಥವಾಗಿ ನಿರ್ವಹಿಸುವಂತೆ ಮಾಡಲು ಅವನಿಗೆ ಸಾಧ್ಯವಾಗುತ್ತದೆ. ಯಜಮಾನನಿಗೆ ಕೆಲಸದ ಅನುಭವವಿದೆ ಎಂದು ಗೊತ್ತಾದಾಗ, ಅವನ ಮಾತಿಗೆ ಕೆಲಸಗಾರರು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಗೌರವದಿಂದ ಪಾಲಿಸುತ್ತಾರೆ.. ಹೇಳಿದ ಕೆಲಸವನ್ನು ಸರಿಯಾಗಿ ಮಾಡುತ್ತಾರೆ. ಅದಿಲ್ಲವಾದರೆ ತಮಗೆ ತಿಳಿದಂತೆ ಮಾಡಿ ಕೆಲಸವನ್ನು ಕೆಡಿಸುತ್ತಾರೆ. ಆದ್ದರಿಂದ ಆಳಾಗಿ ದುಡಿದು ಅನುಭವ ಪಡೆದವನು ಅರಸನಾಗಿ ಯಶಸ್ವಿಯಾಗಬಲ್ಲ ಎಂದು ಈ ಗಾದೆ ತಿಳಿಸಿ ಹೇಳುತ್ತದೆ.

Click here to download Yudha exercises.