Samasagalu are compound words in Kannada formed by joining two or more words to create a new meaning. They are important in grammar and help convey complex ideas simply.

ಸಮಾಸಗಳು

ಎರಡು ಅಥವಾ ಅನೇಕ ಪದಗಳು ಅರ್ಥಕ್ಕೆ ಅನುಸಾರವಾಗಿ ಸೇರಿ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯವು ಲೋಪವಾಗಿ ಒಂದು ಪದವಾಗುವುದಕ್ಕೆ ಸಮಾಸವೆನ್ನುತ್ತಾರೆ.

ಸಮಾಸದಲ್ಲಿ ಬರುವ ಮೊದಲನೆಯ ಪದಕ್ಕೆ ಪೂರ್ವಪದ ಹಾಗೂ ಎರಡನೆಯ ಪದಕ್ಕೆ ಉತ್ತರಪದ ಎಂದು ಕರೆಯುತ್ತಾರೆ. ಸಮಾಸವನ್ನು ಬಿಡಿಸಿ ಬರೆಯುವುದಕ್ಕೆ ವಿಗ್ರಹ ವಾಕ್ಯವೆಂದು ಹೆಸರು.

ಉದಾಹರಣೆ:        ವಿಗ್ರಹ ವಾಕ್ಯ
ಸಮಾಸ =  ಪೂರ್ವಪದ +  ಉತ್ತರಪದ
ಕಾಲುಬಳೆ = ಕಾಲಿನ + ಬಳೆ
ದೇವಾಲಯ = ದೇವರ +  ಆಲಯ
ಮರಗಾಲು =  ಮರದ +  ಕಾಲು
ಹೆಜ್ಜೆನು  =    ಹಿರಿದು + ಜೇನು
ಮುಂಗೈ =  ಕೈಯ  + ಮುಂದು
ಚಕ್ರಪಾಣಿ =  ಚಕ್ರವು + ಪಾಣಿಯಲ್ಲಿ

ಸಮಾಸದ ವಿಧಗಳು

ಕೆಲವು ಸಮಾಸಗಳಲ್ಲಿ ಪೂರ್ವಪದದ ಅರ್ಥವೂ ಮುಖ್ಯವಾಗಿದ್ದರೆ ಇನ್ನು ಕೆಲವು ಸಮಾಸಗಳಲ್ಲಿ ಉತ್ತರ ಪದದ ಅರ್ಥವು ಮುಖ್ಯವಾಗಿರುತ್ತದೆ. ಎರಡು ಪದಗಳ ಅರ್ಥವು ಮುಖ್ಯವಾಗಿರುವ ಸಮಾಸಗಳು ಇವೆ.

ಸಮಾಸದ ವಿಧಗಳು

ಉತ್ತರ ಪದಾರ್ಥಪ್ರಧಾನ ಸಮಾಸಗಳು – ತತ್ಪುರುಷ, ಕರ್ಮಧಾರೆಯ, ದ್ವಿಗು, ಗಮಕ
ಪೂರ್ವ ಪಧಾರ್ಥಪ್ರಧಾನ ಸಮಾಸಗಳು – ಅಂಶಿ, ಕ್ರಿಯಾ
ಉಭಯ ಪದಾರ್ಥಪ್ರಧಾನ ಸಮಾಸ – ದ್ವಂದ್ವ
ಅನ್ಯ ಪದಾರ್ಥಪ್ರಧಾನ ಸಮಾಸ  – ಬಹುವ್ರೀಹಿ
ಅರಿ ಸಮಾಸ

ಉತ್ತರ ಪದಾರ್ಥಪ್ರಧಾನ ಸಮಾಸಗಳು

ದ್ವಿಗು – ಸಂಖ್ಯಾ ವಾಚಕವು ನಾಮಪದದೊಂದಿಗೆ ಸೇರಿ ಆಗುವ ಸಮಾಸವೇ ದ್ವಿಗು. ಸಮಾಸ ಇಲ್ಲಿ ಉತ್ತರ ಪದದ ಅರ್ಥವೇ ಮುಖ್ಯ.

ಎರಡು +  ಕೆಲ  = ಇಕ್ಕೆಲ / ಇರ್ಕೆಲ
ಮೂರು + ಮಡಿ = ಮುಮ್ಮಡಿ
ಒಂದು  + ಕಟ್ಟು = ಒಗ್ಗಟ್ಟು

ಗಮಕ ಸಮಾಸ –  ಗಮಕ ಸಮಾಸದಲ್ಲಿ ಸರ್ವನಾಮ ಅಥವಾ ಕೃದಂತಗಳು ನಾಮಪದದೊಡನೆ ಸೇರುತ್ತದೆ. ಇಲ್ಲಿ ಉತ್ತರ ಪದದ ಅರ್ಥ ಮುಖ್ಯ.
ಅವನು + ಹುಡುಗ = ಆ ಹುಡುಗ
ಇವಳು + ಹೆಂಗಸು = ಈ ಹೆಂಗಸು
ಇದು + ನಾಯಿ  = ಈ ನಾಯಿ
ಮಾಡಿದ್ದು + ಅಡುಗೆ = ಮಾಡಿದ ಅಡುಗೆ

ತತ್ಪುರುಷ ಸಮಾಸ = ಎರಡು ನಾಮಪದಗಳು ಸೇರಿ ಆಗುವದು ತತ್ಪುರುಷ ಸಮಾಸ. ಇಲ್ಲಿ ಉತ್ತರ ಪದದ ಅರ್ಥ ಮುಖ್ಯ.
ಅರಸನ + ಮನೆ = ಅರಮನೆ
ಕಾಲಿನ +  ಬಳೆ = ಕಾಲುಬಳೆ
ಕಣ್ಣಿನಿಂದ + ಕುರುಡ = ಕಣ್ಣುಗುರುಡ
ತೇರಿಗೆ + ಮರ = ತೇರುಮರ
ಸಂಜೆಯ +  ಕೆಂಪು = ಸಂಜೆಗೆಂಪು
ಬೆಟ್ಟದ + ತಾವರೆ = ಬೆಟ್ಟದಾವರೆ

ಕರ್ಮಧಾರಯ ಸಮಾಸ – ವಿಶೇಷಣ ಮತ್ತು ನಾಮಪದಗಳು ಸೇರಿ ಆಗುವ ಸಮಾಸ. ಉತ್ತರ ಪದದ ಅರ್ಥ.

ದೊಡ್ಡವನು + ಹುಡುಗ = ದೊಡ್ಡಹುಡುಗ
ಹಳೆಯದು + ಕನ್ನಡ = ಹಳೆಗನ್ನಡ
ಇನಿದು + ಮಾವು = ಇಮ್ಮಾವು
ಹಿರಿದು + ಬಾಗಿಲು = ಹೆಬ್ಬಾಗಿಲು

ಪೂರ್ವ ಪಧಾರ್ಥಪ್ರಧಾನ ಸಮಾಸಗಳು

ಅಂಶಿ ಸಮಾಸ ವಸ್ತುವಿನ ಒಂದು ಭಾಗ ಅಥವಾ ಅಂಶವನ್ನು,  ಇಡಿಯ ವಸ್ತು ಅಥವಾ ಅಂಶದೊಡನೆ ಸಂಬಂಧವನ್ನು ಸೂಚಿಸುವ ಸಮಾಸ. ಪೂರ್ವ ಪದದ ಅರ್ಥವೇ ಪ್ರಧಾನ.

ಕೈಯ + ಅಡಿ =  ಅಂಗೈ
ಕೈಯ + ಮುಂದು = ಮುಂಗೈ
ತಲೆಯ + ಮುಂದೆ = ಮುಂದಲೆ
ಕಾಲು + ಮುಂದು = ಮುಂಗಾಲು/ ಮುಂಗಾಲ್‌

ಕ್ರಿಯಾ ಸಮಾಸ – ನಾಮಪದ ಮತ್ತು ಕ್ರಿಯಾಪದಗಳು ಸೇರಿ ಆಗುವ ಸಮಾಸ. ಪೂರ್ವ ಪದದ ಅರ್ಥ ಪ್ರಧಾನ.

ಮನೆಯನ್ನು + ಕಟ್ಟು = ಮನೆಕಟ್ಟು
ಕೈಯನ್ನು + ಕೊಡು =  ಕೈಕೊಡು
ಕಣ್ಣನ್ನು + ತೆರೆ = ಕಣ್ದೆರೆ

ಉಭಯ ಪದಾರ್ಥಪ್ರಧಾನ

ದ್ವಂದ್ವ ಸಮಾಸ – ಒಂದೇ ಬಗೆಯ ಹಲವು ನಾಮಪದಗಳು ಸೇರಿ ಆಗುವ ಸಮಾಸ. ಎಲ್ಲ ಪದಗಳ ಅರ್ಥವೂ ಮುಖ್ಯ. ಎರಡು ಅಥವಾ ಅನೇಕ ನಾಮಪದಗಳು ಸೇರಿ ಎಲ್ಲ ಪದಗಳ ಅರ್ಥಗಳು ಪ್ರಧಾನವಾಗಿರುವದೇ ದ್ವಂದ್ವ ಸಮಾಸ.

ಕಸವೂ + ಕಡ್ಡಿಯೂ = ಕಸಕಡ್ಡಿ ಅಥವಾ ಕಸಕಡ್ಡಿಗಳು
ಕೆರೆಯೂ + ಕಟ್ಟೆಯೂ + ಬಾವಿಯೂ = ಕೆರೆಕಟ್ಟೆಬಾವಿ ಅಥವಾ ಕೆರೆಕಟ್ಟೆಬಾವಿಗಳು

ಬಹುವ್ರೀಹಿ ಸಮಾಸ ಹಲವು ನಾಮಪದಗಳು ಸೇರಿ ಆಗುವ ಸಮಾಸ. ಇಲ್ಲಿ ಬೇರೆ ಅರ್ಥವೇ ಮುಖ್ಯ.

ಹಣೆಯಲ್ಲಿ + ಕಣ್ಣು ಉಳ್ಳವ = ಹಣೆಗಣ್ಣ (ಶಿವ)
ಮೂರು + ಕಣ್ಣು ಉಳ್ಳವ = ಮುಕ್ಕಣ್ಣ
ನಿಡಿದು + ಮೂಗು ಉಳ್ಳವ = ನಿಡುಮೂಗ

ಅರಿ ಸಮಾಸ ಕನ್ನಡ ಮತ್ತು ಸಂಸ್ಕೃತ ಶಬ್ದಗಳು, ಕನ್ನಡ ಮತ್ತು ಅನ್ಯದೇಶ್ಯ ಶಬ್ದಗಳು ಸೇರಿ ಆಗುವದು ಅರಿಸಮಾಸ.

ಬಿರುದಾವಳಿ, ದಳಮುಖದವಳ, ರಾಯಕೋಲಾಹಲ, ದಳಮುಖಾದಿತ್ಯ

Click here to download samsagalu