Sarvjnana Vachanagalu kannada poem grade VII written by saravajna. Sarvjnana Vachanagalu tili kannada text book class 7th KSEEB solutions is about life lessons from Sarvjna.
Teachers and elders must be respected. We should show sincere devotion and regard towards them because a teacher removes the darkness of ignorance and gives the light of knowledge. Parents work day and night for our well-being. Therefore, students should cultivate the good value of respecting teachers, elders, and parents from childhood itself.
ಸರ್ವಜ್ಞನ ವಚನಗಳು
ಪದ್ಯ ಪ್ರವೇಶ: ಗುರು ಹಿರಿಯರನ್ನು ಗೌರವಿಸಬೇಕು. ಅದರಲ್ಲಿ ಶ್ರದ್ಧಾಭಕ್ತಿಗಳನ್ನು ಇರಿಸಿಕೊಳ್ಳಬೇಕು. ಏಕೆಂದರೆ ಗುರು ಅಜ್ಞಾನದ ಕತ್ತಲನ್ನು ದೂರಮಾಡಿ ಸುಜ್ಞಾನದ ಬೆಳಕನ್ನು ನೀಡುತ್ತಾನೆ. ತಂದೆತಾಯಿಗಳು ನಮ್ಮ ಶ್ರೇಯಸ್ಸಿಗೆ ಹಗಲಿರುಳು ದುಡಿಯುತ್ತಾರೆ. ಹೀಗಾಗಿ ಗುರುಹಿರಿಯರನ್ನು ತಂದೆ ತಾಯಿಗಳನ್ನು ಗೌರವಿಸುವ ಸುಸಂಸ್ಕೃತಿಯನ್ನು ವಿದ್ಯಾರ್ಥಿಗಳು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು.
ಹರ ತನ್ನೊಳಿರ್ದು, ಗುರು ತೋರದೇ ತಿಳಿವುದೆ?
ಮರದೊಳಗೆ ಅಗ್ನಿ ಇರುತಿರ್ದು! ತನ್ನ
ತಾನರಿಯಬೇಕೆಂದ ಸರ್ವಜ್ಞ ||
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರು | ಗುರುವಿಂದ
ಬಂಧುಗಳು ಉಂಟೆ ಸರ್ವಜ್ಞ ||
ಗುರುವಿಂದ ಬಂಧುಗಳು, ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು | ಜಗಕೆಲ್ಲ
ಗುರುವಿಂದ ಮುಕ್ತಿ ಸರ್ವಜ್ಞ ||
ಗುರುಗಳಿಗೆ ಹಿರಿಯರಿಗೆ ಶಿರಬಾಗಿ ಎರಗಿದರೆ
ನರಸುರರು ಬಂದು ಸಿರಿಸುರಿದ | ಕೈಲಾಸ
ಕರತಲಾಮಲಕ ಸರ್ವಜ್ಞ ||
ಕೃತಿಕಾರರ ಪರಿಚಯ:
ಸರ್ವಜ್ಞನ ಕಾಲವನ್ನು ಅವನ ವಚನಗಳ ಆಧಾರದಿಂದ ಕ್ರಿಸ್ತ ಶಕ ೧೫ ರಿಂದ ೧೬ನೇ ಶತಮಾನಗಳ ನಡುವಿನ ಅವಧಿ ಎಂದು ಹೇಳಲಾಗಿದೆ. ಸರ್ವಜ್ಞನ ಹುಟ್ಟೂರು ಅಂಬಲೂರು. ಈಗಿನ ಹಾವೇರಿ ಜಿಲ್ಲೆಯ ಅಬ್ಬಲೂರು. ಈತನ ತಂದೆ ಬಸವರಸ, ತಾಯಿ ಮಾಳಿ. ಸರ್ವಜ್ಞನ ವಚನಗಳು ನೀತಿಪ್ರದವಾಗಿವೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಔಷಧಿಯಂತಿವೆ. ಸರ್ವಜ್ಞನು ಆಡುವ ನುಡಿಗಳಲ್ಲಿ ವಚನಗಳನ್ನು ತ್ರಿಪದಿಯಲ್ಲಿ ರಚಿಸಿದ್ದಾನೆ. ಸರ್ವಜ್ಞನ ವಚನಗಳನ್ನು ಮೊದಲಬಾರಿಗೆ ಉತ್ತಂಗಿ ಚನ್ನಪ್ಪನವರು ಸಂಗ್ರಹಿಸಿದ್ದಾರೆ.
ಪದಗಳ ಅರ್ಥ ತಿಳಿಯಿರಿ
ಅರಿ = ತಿಳಿ
ಅರಿಯರು = ತಿಳಿಯರು
ಅಗ್ನಿ = ಬೆಂಕಿ
ಆಮಲಕ = ನೆಲ್ಲಿಕಾಯಿ
ಇಹುದು = ಇದೆ
ಎರಗು = ನಮಸ್ಕರಿಸು
ಕಳೆ = ನಾಶಮಾಡು
ಜಗ = ಲೋಕ
ತನ್ನೊಳಿರ್ದು = ತನ್ನ ಒಳಗೆ ಇರುವ
ತೋರದೆ = ಕಾಣದೆ
ದೈವ = ದೇವರು
ನರ = ಮಾನವ
ಪುಣ್ಯ = ಪವಿತ್ರ
ಬಂಧನ = ಕಟ್ಟು, ಸೆರೆಮನೆ
ಬಂಧುಗಳು = ನೆಂಟರು, ಸಂಬಂಧಿಕರು
ಬಂಧನ = ಸೆರೆ
ಮುಕ್ತಿ = ಬಿಡುಗಡೆ, ಮೋಕ್ಷ
ಶಿರ = ತಲೆ
ಸಿರಿ = ಸಂಪತ್ತು
ಹರ = ಶಿವ, ಶ್ರೇಷ್ಠತೆ, ದೈವೀಗುಣ
ಹಿರಿಯರು = ದೊಡ್ಡವರು
ಸುರ = ದೇವತೆ
ಟಿಪ್ಪಣಿ
೧. ಮುಕ್ತಿ = ಹುಟ್ಟು ಸಾವುಗಳ ಚಕ್ರದಿಂದ ಬಿಡುಗಡೆ ಹೊಂದುವುದು.
೨. ಕೈಲಾಸ = ಶಿವ ಪಾರ್ವತಿಯರು ನೆಲೆಸಿರುವರೆಂದು ನಂಬಿರುವ ಪರ್ವತ.
೩. ಕರತಲಾಮಲಕ = ಅಂಗೈ ಮೇಲಿರುವ ನೆಲ್ಲಿಕಾಯಿಯಂತೆ ಸ್ಪಷ್ಟಗೋಚರ.
೪. ಸಿರಿ = ಸಿರಿ ಎಂಬುದು ಲಕ್ಷ್ಮಿಯ ಇನ್ನೊಂದು ಹೆಸರು.
೫. ಪುಣ್ಯ = ಒಳ್ಳೆಯ ಕೆಲಸದಿಂದ ದೊರೆಯುವ ಫಲ.
೬. ತ್ರಿಪದಿ = ಮೂರು ಸಾಲಿನ ಪದ್ಯ.
II ಪ್ರಶ್ನೆಗಳು
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.( Answer the following one sentence)
೧. ನಮ್ಮೊಳಗಿನ ಹರನನ್ನು ಯಾರು ತೋರುತ್ತಾರೆ?
ಉ: ನಮ್ಮೊಳಗಿನ ಹರನನ್ನು ಗುರುವು ತೋರುತ್ತಾರೆ.
೨. ಹರನು ನಮ್ಮೊಳಗೆ ಇರುವದನ್ನು ಸರ್ವಜ್ಞ ಕವಿ ಯಾವುದಕ್ಕೆ ಹೋಲಿಸಿದ್ದಾನೆ?
ಉ: ಹರನು ನಮ್ಮೊಳಗೆ ಇರುವದನ್ನು ಸರ್ವಜ್ಞ ಕವಿ ಮರದೊಳಗಿನ ಬೆಂಕಿಗೆ ಹೋಲಿಸಿದ್ದಾನೆ.
೩. ತನ್ನನ್ನು ತಾನು ಅರಿಯುವದು ಎಂದರೇನು?
ಉ: ನಮ್ಮ ಮನಸ್ಸನ್ನು ಅರಿಯುವುದೇ ತನ್ನನ್ನು ತಾನು ಅರಿಯುವದು.
೪. ಜಗಕೆ ಯಾರಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ ಕವಿ ಹೇಳಿದ್ದಾನೆ?
ಉ: ಜಗಕೆ ಗುರುವಿನಿಂದ ಮುಕ್ತಿ ದೊರೆಯುವುದೆಂದು ಸರ್ವಜ್ಞ ಕವಿ ಹೇಳಿದ್ದಾನೆ.
೫. ಗುರುವಿಗಿಂತ ಬೇರೆ ಬಂಧುವಿಲ್ಲ ಏಕೆ?
ಉ: ಗುರು ನಮ್ಮನ್ನು ಬಂಧನದಿಂದ ಬಿಡಿಸಿ, ಮುಕ್ತಿಯ ಕಡೆ ಕರೆದೊಯ್ಯುವುದಕ್ಕೆ ಗುರುವಿಗಿಂತ ಬೇರೆ ಬಂಧುವಿಲ್ಲ.
೬. ಗುರು ಹಿರಿಯರಿಗೆ ಹೇಗೆ ನಮಿಸಬೇಕು?
ಉ: ಗುರು ಹಿರಿಯರಿಗೆ ಶಿರಬಾಗಿ ನಮಿಸಬೇಕು.
೭. ಸರ್ವಜ್ಞ ಕವಿಯ ಜನ್ಮಸ್ಥಳ ಯಾವುದು?
ಉ: ಸರ್ವಜ್ಞ ಕವಿಯ ಜನ್ಮಸ್ಥಳ ಅಂಬಲೂರು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.( Answer the following in two – three sentences)
೧. ತನ್ನ ತಾನು ಅರಿಯುವುದರಿಂದ ಪ್ರಯೋಜನಗಳೇನು?
ಉ: ತನ್ನ ತಾನು ಅರಿಯುವುದರಿಂದ ನಮ್ಮ ಅಂತರಂಗದಲ್ಲಿರುವ ದೇವರ ಸತ್ಯ ತಿಳಿಯುತ್ತದೆ. ಒಳ್ಳೆಯ ಸಂಸ್ಕೃತಿಯನ್ನು ಅರಿತುಕೊಂಡು, ಗುರು ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬಹುದು.
೨. ಬಂಧುಗಳ ಸ್ವಭಾವ ಯಾವ ರೀತಿಯದು ಎಂದು ಸರ್ವಜ್ಞ ಕವಿ ಹೇಳಿದ್ದಾನೆ?
ಉ: ಬಂಧುಗಳ ಸ್ವಭಾವ ಬಂದು ಉಂಡು ಹೋಗುವದು. ಸಿಹಿಗೆ ಮುತ್ತುವ ಇರುವೆಗಳ ಹಾಗೆ. ಸಿಹಿ ಮುಗಿದಾಗ ಇರುವೆಗಳು ಖಾಲಿಯಾಗುವಂತೆ, ಬಂಧುಗಳು ಕಷ್ಟಕಾಲದಲ್ಲಿ ದೂರವಾಗುವ ಸ್ವಭಾವ ಹೊಂದಿದ್ದಾರೆ.
೩. ಗುರುವಿನ ಮಹಿಮೆಯನ್ನು ಸರ್ವಜ್ಞ ಕವಿ ಏನೆಂದು ಬಣ್ಣಿಸಿದ್ದಾನೆ?
ಉ: ಸರ್ವಜ್ಞನ ಪ್ರಕಾರ ಜಗತ್ತಿನಲ್ಲಿ ಶ್ರೇಷ್ಠವಾದ ಮಾರ್ಗದರ್ಶಕರು ಗುರು. ಗುರುವಿನಿಂದಲೇ ಬಂಧುಗಳು, ದೇವರು, ಪುಣ್ಯ ಹಾಗೂ ಜಗಕ್ಕೆ ಮುಕ್ತಿ ಸಿಗುತ್ತದೆ ಎಂದು ಸರ್ವಜ್ಞ ಕವಿ ಬಣ್ಣಿಸಿದ್ದಾನೆ.
೪. ಗುರು ಹಿರಿಯರಿಗೆ ನಮಸ್ಕರಿಸುವುದರಿಂದ ಯಾವ ಫಲಗಳು ಸಿಗುತ್ತವೆ?
ಉ: ಗುರು ಹಿರಿಯರಿಗೆ ನಮಸ್ಕರಿಸುವುದರಿಂದ ಜ್ಞಾನದ ಫಲಗಳು, ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರ ಸಾಕ್ಷಾತ್ಕಾರವಾಗಿ, ಲಕ್ಷ್ಮಿಯ ಕೃಪೆ ಸಿಗುತ್ತದೆ. ಕೈಲಾಸವು ದೊರೆಯುತ್ತದೆ.
III ಭಾಷಾಭ್ಯಾಸ
ಅ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ. (Make your own sentence)
ಬಂಧು = ನನ್ನ ಮನೆಗೆ ಬಂಧುಗಳು ಬಂದರು.
ಬಂಧನ = ಮಹಾತ್ಮ ಗಾಂಧೀಜಿಯವರು ಬಂಧನದಲ್ಲಿದ್ದರು.
ಪುಣ್ಯ = ನಾವು ಯಾವಾಗಲೂ ಪುಣ್ಯ ಮಾಡಬೇಕು.
ಮುಕ್ತಿ = ಎಲ್ಲರಿಗೂ ಮುಕ್ತಿ ಬೇಕು.
ಸಿರಿ = ಎಲ್ಲರ ಮನೆಯಲ್ಲಿ ಸಿರಿ ಇರಬೇಕು.
ತಿಳಿವು = ಒಳ್ಳೆಯ ತಿಳಿವು ಎಲ್ಲರಿಗೂ ಇರಬೇಕು.
ಆ) ಕೆಳಗಿನವುಗಳಿಗೆ ವಿರುದ್ಧ ಪದಗಳನ್ನು ಬರೆಯಿರಿ. (Write the opposite word)
ಬಂಧನ X ಬಿಡುಗಡೆ ಪುಣ್ಯ X ಪಾಪ
ಹಿರಿಯ X ಕಿರಿಯ ಜ್ಞಾನಿ X ಅಜ್ಞಾನಿ
ಇ) ಕೆಳಗೆ ನೀಡಿರುವ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ. ( Write the synonyms )
ಅರಿ = ತಿಳಿ, ಅರ್ಥ
ನರ = ಮಾನವ, ಮನುಷ್ಯ
ಶಿರ = ತಲೆ, ಮಸ್ತಕ
ಕರ = ಕೈ, ಹಸ್ತ
ಜಗ = ಲೋಕ, ವಿಶ್ವ
ಬಂಧು = ನೆಂಟ, ಸಂಬಂಧಿ
ಈ) ನೀಡಿರುವ ಪದಗಳನ್ನು ಬಿಡಿಸಿ ಬರೆಯಿರಿ. (Split the word)
ಮರದೊಳಗೆ = ಮರದ + ಒಳಗೆ
ತಾನರಿಯ = ತಾನು + ಅರಿಯ
ಬಂದೊಂಡು = ಬಂದು + ಉಂಡು
ಕಳೆಯಲರಿಯರು = ಕಳೆಯಲು + ಅರಿಯರು
IV. ಸೈದ್ಧಾಂತಿಕ ವ್ಯಾಕರಣ
ವಿಭಕ್ತಿ ಪ್ರತ್ಯಯಗಳು: ನಾಮ ಪ್ರಕೃತಿಗೆ ಸೇರುವ ಪ್ರತ್ಯಯಗಳೇ ವಿಭಕ್ತಿ ಪ್ರತ್ಯಯಗಳು.
| ವಿಭಕ್ತಿ | ಪ್ರತ್ಯಯ | ನಾಮಪ್ರಕೃತಿ | ಪ್ರತ್ಯಯ | ನಾಮಪದ |
| ಪ್ರಥಮ | ಉ | ಮರ | ಉ | ಮರವು |
| ದ್ವಿತೀಯ | ಅನ್ನು | ಮರ | ಅನ್ನು | ಮರವನ್ನು |
| ತೃತೀಯ | ಇಂದ | ಮರ | ಇಂದ | ಮರದಿಂದ |
| ಚತುರ್ಥಿ | ಗೆ, ಕ್ಕೆ, ಇಗೆ | ಮರ | ಗೆ, ಕ್ಕೆ, ಇಗೆ | ಮರಕ್ಕೆ |
| ಪಂಚಮಿ | ದೆಸೆಯಿಂದ | ಮರ | ದೆಸೆಯಿಂದ | ಮರದ ದೆಸೆಯಿಂದ |
| ಷಷ್ಠಿ | ಅ | ಮರ | ಅ | ಮರದ |
| ಸಪ್ತಮಿ | ಅಲ್ಲಿ | ಮರ | ಅಲ್ಲಿ | ಮರದಲ್ಲಿ |
ಕೆಳಗೆ ನೀಡಿರುವ ನಾಮ ಪ್ರಕೃತಿಗಳಾದ ನದಿ, ರವಿ, ಮನೆ ಇವುಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಿ ಖಾಲಿ ಜಾಗದಲ್ಲಿ ಬರೆಯಿರಿ.
| ವಿಭಕ್ತಿ | ಪ್ರತ್ಯಯ | ನದಿ | ರವಿ | ಮನೆ |
| ಪ್ರಥಮ | ಉ | ನದಿಯು | ರವಿಯು | ಮನೆಯು |
| ದ್ವಿತೀಯ | ಅನ್ನು | ನದಿಯನ್ನು | ರವಿಯನ್ನು | ಮನೆಯನ್ನು |
| ತೃತೀಯ | ಇಂದ | ನದಿಯಿಂದ | ರವಿಯಿಂದ | ಮನೆಯಿಂದ |
| ಚತುರ್ಥಿ | ಗೆ, ಕ್ಕೆ, ಇಗೆ | ನದಿಗೆ | ರವಿಗೆ | ಮನೆಗೆ |
| ಪಂಚಮಿ | ದೆಸೆಯಿಂದ | ನದಿಯ ದೆಸೆಯಿಂದ | ರವಿಯ ದೆಸೆಯಿಂದ | ಮನೆಯ ದೆಸೆಯಿಂದ |
| ಷಷ್ಠಿ | ಅ | ನದಿಯ | ರವಿಯ | ಮನೆಯ |
| ಸಪ್ತಮಿ | ಅಲ್ಲಿ | ನದಿಯಲ್ಲಿ | ರವಿಯಲ್ಲಿ | ಮನೆಯಲ್ಲಿ |
One Response